ನಾ ಕಂಡ ಸರಳತೆಯ ಹಾಡುಗಾರ್ತಿ - ರೂಪಶ್ರೀ ಬನೇರಿ (ರೂಪಕ್ಕ)...

ಸಂಗೀತ ಎನ್ನುವುದು ಭಗವಂತನ ಉತ್ಕೃಷ್ಟ ಉಪಾಸನಾ ಕ್ರಮಗಳಲ್ಲೊಂದು. ಆತ್ಮತೃಪ್ತಿಯ ಜತೆ ಹಲವರನ್ನು ಸಂತೃಪ್ತಗೊಳಿಸುವ ಏಕೈಕ ಅನನ್ಯ ಸಾಧನಾ ಮಾರ್ಗ. ಎಲ್ಲಾ ಕಲೆಗಳಲ್ಲೂ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ. ಎಲ್ಲಾ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ಸಂಗೀತವನ್ನು ಕೇಳುವುದು ಕೇವಲ ಅದರ ರಸಸ್ವಾದನೆಗಷ್ಟೇ ಅಲ್ಲ. ಸಂಗೀತಕ್ಕೆ ಮನಸ್ಸು ಹಾಗೂ ದೇಹದ ಖಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ. ಇಂತಹ ಸಂಗೀತ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸತತ ಶ್ರಮಪಡುವವರಲ್ಲೊಬ್ಬರು ಕು. ವಿದುಷಿ ರೂಪಶ್ರೀ ಬನೇರಿ.

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬನೇರಿಯ ರಮೇಶ್ ಕಣ್ಣಾರಾಯ ಮತ್ತು ರಾಜೇಶ್ವರಿ ಕಣ್ಣಾರಾಯರ ಸುಪುತ್ರಿಯಾಗಿರುವ ಇವರು ತಾಯಿಯೇ ಮೊದಲ ಗುರು ಎಂಬಂತೆ ತನ್ನ ತಾಯಿಯಿಂದಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.

ಪ್ರಾಥಮಿಕ ಶಿಕ್ಷಣವನ್ನು ಮುಂಡೂರು ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಹಾಗೂ ಬಿ.ಎಸ್ಸಿ ಪದವಿಯನ್ನು ವಿವೇಕಾನಂದ ಕಾಲೇಜಿನಲ್ಲಿ, ಎಂ.ಎಸ್ಸಿ ಪದವಿಯನ್ನು ಫಿಲೋಮಿನಾ ಕಾಲೇಜಿನಲ್ಲಿ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರು. ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ತಾನು ಕಲಿತ ಸಾಂದೀಪನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿಕೊಂಡರು. ಪ್ರಸ್ತುತ ಮಂಗಳೂರಿನ ಕೆಂಜಾರು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕಿ.

ತನ್ನ ಎಂಟನೇ ವರ್ಷದಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿ ಎಳವೆಯಲ್ಲಿಯೇ ತನ್ನ ಧ್ವನಿಯನ್ನು ಪಸರಿಸಲು ಶುರುಮಾಡಿದರು. ತಂದೆ ತಾಯಿಯರ ಪ್ರೋತ್ಸಾಹದಿಂದ ಒಂದು ಕಲಾವಿದೆಯಾಗಿ ಬದಲಾಗಿ ವಿದುಷಿ ಶ್ರೀಮತಿ ಪವಿತ್ರಾ ರೂಪೇಶ್ ರವರ ಶಿಷ್ಯೆಯಾಗಿ, ಸತತ ಪರಿಶ್ರಮದಿಂದ ವಿದ್ವತ್ ಪದವಿಯನ್ನು ಪಡೆದು ಇದೀಗ ಎಂ.ಎ ಪದವಿಗಾಗಿ ಅಭ್ಯಸಿಸುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಇವರು ಪುತ್ತೂರಿನ ಆಸುಪಾಸು ಸೇರಿದಂತೆ ಆಳ್ವಾಸ್ ನುಡಿಸಿರಿ, ಉಡುಪಿ, ಸುಬ್ರಹ್ಮಣ್ಯ, ಶಿಬಾಜೆ, ನೆಲ್ಯಾಡಿ, ಶಿವಮೊಗ್ಗ ಹೀಗೆ ಮುಂತಾದ ಕಡೆಗಳಲ್ಲಿ ಸಂಗೀತ ರಸದೌತಣವನ್ನು ಉಣಬಡಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರ ಪರಿಶ್ರಮಕ್ಕೆ ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿದೆ.

ತಾನು ಕಲಿತ ವಿದ್ಯೆಯನ್ನು ಇತರರಿಗೂ ಹಂಚುತ್ತಾ, ಕೆಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ನವಪ್ರತಿಭೆಗಳನ್ನು ಹುರಿದುಂಬಿಸುವ ಇವರು ವಿದ್ಯಾರ್ಥಿಗಳಿಗೆಲ್ಲಾ ನೆಚ್ಚಿನ ಮಾತಾಜಿಯೂ ಹೌದು.

ಇವರ ಕೆಲವು ಹಾಡುಗಳನ್ನು ಅಂತರ್ಜಾಲ ತಾಣ ಯೂಟ್ಯೂಬ್ ನಲ್ಲಿಯೂ ವೀಕ್ಷಿಸಬಹುದು.
(1. https://www.youtube.com/channel/UCX-ObXlzQBXSkuSazb9op0w
ಅವರ ಮಾತಿನಲ್ಲೇ ಹೇಳುವುದಾದರೆ ಸಂಗೀತ ಎಂಬುದು ಒಂದು ಅದ್ಬುತ ಶಕ್ತಿ. ಎಲ್ಲಾ ನೋವು ಮರೆಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಎನ್ನುವ ವಿದ್ಯೆ ನನಗೆ ಒಲಿದದ್ದು ನನ್ನ ಅದೃಷ್ಟ. ಸಂಗೀತವೇ ನನ್ನ ಉಸಿರು ಎನ್ನುವ ಇವರು ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆಯನ್ನು ಮಾಡಿ ಎಲ್ಲರಿಂದಲೂ ಗುರುತಿಸಲ್ಪಡುವಂತವಳಾಗಬೇಕೆಂದು ಛಲದಿಂದ ಮುನ್ನಡೆಯುತ್ತಿದ್ದಾರೆ. ಇವರ ಹಾದಿಯು ಸುಗಮವಾಗಿರಲೆಂದು ನಾವೆಲ್ಲರೂ ಹಾರೈಸೋಣ.

✍ ಶ್ರೀಕರ ಕಲ್ಲೂರಾಯ.

ಈ ಬರವಣಿಗೆಯು ೨೦೧೮ನೇ ಜನವರಿ ೨೫ರಂದು ಉದಯವಾಣಿ ದಿನಪತ್ರಿಕೆಯ ಸುದಿನ ದಲ್ಲಿ ಪ್ರಕಟಗೊಂಡಿದೆ.

Comments

Popular posts from this blog

ಪುತ್ತೂರಿಂದ ಮೈಸೂರಿಗೆ...

ಅಪ್ಪ-ಮಗನ ಕಾರುಬಾರು...

ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...